ಆಕ್ಟ್ ಆಫ್ ಸೆಟಲ್‍ಮೆಂಟ್
1701ರಲ್ಲಿ ಇಂಗ್ಲೆಂಡಿನ ಪಾರ್ಲಿಮೆಂಟಿನಲ್ಲಿ ಅಂಗೀಕೃತವಾದ ಬಹುಮುಖ್ಯ ಕಾಯಿದೆ. ಇದರ ಪ್ರಕಾರ, ದೊರೆ ವಿಲಿಯಂಗಾಗಲಿ ವಾರಸುದಾರಳಾಗಿದ್ದ ರಾಜಪುತ್ರಿ ಆನ್‍ಳಿಗಾಗಲಿ ಮಕ್ಕಳಾಗದಿದ್ದರೆ ಮೊದಲನೆಯ ಜೇಮ್ಸ್‍ನ ಮೊಮ್ಮಗಳಾದ ಹ್ಯಾನೋವರ್‍ನ ರಾಜಪುತ್ರಿ ಸೋಫಿಯ ಅಥವಾ ಅವಳ ಸಂತತಿಯವರು ಇಂಗ್ಲೆಂಡಿನ ಸಿಂಹಾಸನಕ್ಕೆ ಉತ್ತರಾಧಿಕಾರಿಗಳೆಂದು ತೀರ್ಮಾನವಾಯಿತು. ಇವರು ಪ್ರಾಟೆಸ್ಟೆಂಟರೇ ಆಗಿರಬೇಕೆಂಬ ನಿಯಮ ಕೂಡ ಅದಕ್ಕೆ ಸೇರಿತ್ತು. ದೊರೆ ಇಂಗ್ಲೆಂಡಿನ ಪ್ರಾಟೆಸ್ಟೆಂಟ್ ಧರ್ಮಾವಲಂಬಿಯಾಗಿರಬೇಕು. ಅವನು ಪಾರ್ಲಿಮೆಂಟಿನ ಅನುಮತಿಯಿಲ್ಲದೆ ದೇಶದಿಂದ ಹೊರಗೆ ಹೋಗಕೂಡದು. ಹೊರದೇಶಗಳ ರಕ್ಷಣೆಗಾಗಿ ಇಂಗ್ಲೆಂಡಿನ ಸೈನ್ಯವನ್ನು ಉಪಯೋಗಿಸುವುದಕ್ಕೆ ಪಾರ್ಲಿಮೆಂಟಿನ ಅನುಮತಿ ಅವಶ್ಯಕ. ದೊರೆಯಿಂದ ನಿಯಮಿತನಾದವರಿಗೆ ಅಥವಾ ವೇತನ ಪಡೆಯುತ್ತಿರುವವರಿಗೆ, ಪಾರ್ಲಿಮೆಂಟಿನಲ್ಲಿ ಕುಳಿತುಕೊಳ್ಳಲು ಅಧಿಕಾರವಿಲ್ಲ- ಇವು ಇತರ ಷರತ್ತುಗಳು. ಜಾಕೊಬೈಟ್ ಧರ್ಮೀಯರು (ನೋಡಿ- ಜ್ಯಾಕೊಬೈಟರು) ನಡೆಸುತ್ತಿದ್ದ ಒಳಸಂಚುಗಳು, ದೊರೆ ವಿಲಿಯಂಗಾಗಲಿ ಆನ್‍ಗಾಗಲಿ ಸಂತಾನವಿಲ್ಲದ್ದು, ವಿಲಿಯಂ ನಡೆಸುತ್ತಿದ್ದ ಹಾಲೆಂಡ್ ಪರ ರಾಜನೀತಿ, ಇವು ಈ ಕಾಯಿದೆ ರಚನೆಗೆ ಮುಖ್ಯ ಕಾರಣಗಳು.										
(ಜಿ.ಎನ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ